ಕೋಕೋ

ಕಕಾವೊ (ತಿಯೋಬ್ರೋಮ ಕಕಾವೊ) ಗಿಡದ ಬೀಜದಿಂದ ಪಡೆಯಲಾಗುವ ಒಂದು ಸುಪ್ರಸಿದ್ಧ ಪಾನೀಯ. ಕಕಾವೊ ಸ್ಟರ್‍ಕ್ಯುಲಿಯೇಸೀ ಕುಟುಂಬಕ್ಕೆ ಸೇರಿದೆ; ಮಧ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳ ಮೂಲವಾಸಿ. ಗಿಡ ಸ್ವಾಭಾವಿಕವಾಗಿ ಸುಮಾರು 40' ಎತ್ತರಕ್ಕೆ ಬೆಳೆಯುತ್ತದೆ. ಆದರೆ ಹಣ್ಣು ಕೀಳಲು ಅನುಕೂಲವಾಗಲು 15'-20' ಎತ್ತರಕ್ಕೆ ಈ ಮರಗಳನ್ನು ಕತ್ತರಿಸುವುದು ವಾಡಿಕೆಯಲ್ಲಿರುವ ಕ್ರಮ. ಕಕಾವೊ ಸ್ವಾಭಾವಿಕವಾಗಿ ಅತಿಯಾಗಿ ರೆಂಬೆಗಳಿರುವ ಹರಡಿಕೊಳ್ಳುವ ಮರ. ಎಲೆಗಳು ಅಂಡಾಕಾರವಾಗಿ ಚರ್ಮದ ಪಟ್ಟಿಯ ಹಾಗಿದ್ದು ಸುಮಾರು ಒಂದು ಅಡಿ ಉದ್ದವಿರುತ್ತವೆ. ಚಿಕ್ಕದಾದ ಗುಲಾಬಿ ಬಣ್ಣದ ಹೂಗಳು ವಯಸ್ಸಾದ ಕಾಂಡಗಳ ಮೇಲೆ ಬೆಳೆದಿರುತ್ತವೆ. ಕಾಯಿಗಳ ಬಣ್ಣ ಹಸಿರು; ಚೆನ್ನಾಗಿ ಹಣ್ಣಾದ ಮೇಲೆ ಬಣ್ಣ ಹಳದಿಕಿತ್ತಳೆಯಿಂದ ಕೆಂಪು ಮಿಶ್ರಿತ ನೇರಿಳೆವರೆವಿಗೂ ವ್ಯತ್ಯಾಸವಾಗುತ್ತದೆ. ಮಾಗಿದ ಹಣ್ಣುಗಳು ದಪ್ಪವಾದ ಸೌತೆಕಾಯಿ ರೀತಿ 6"-14" ಉದ್ದ ಮತ್ತು 2"-5" ದಪ್ಪ ಇದ್ದು ಬಿಳಿಯ ಬಣ್ಣದಿಂದ ಕೂಡಿ ಐದು ದಿಂಡುಗಳುಳ್ಳ ಸಂಪುಟ ಮಾದರಿಯದಾಗಿವೆ. ಒಂದೊಂದು ಹಣ್ಣಿನಲ್ಲಿ ಬಿಳಿಯ ಇಲ್ಲವೆ ಗುಲಾಬಿ ಬಣ್ಣದ ತಿರುಳಿದ್ದು ಈ ತಿರುಳಿನಲ್ಲಿ 20-50 ಬೀಜಗಳು ಹುದುಗಿರುತ್ತವೆ. ಬೀಜಗಳ ಆಕಾರ ಬಾದಾಮಿಯಂತೆ; ಬಣ್ಣ ನೇರಿಳೆ.

ಕೋಕೋ ಬೀಜಗಳ ಉಪಯೋಗ ಬಲುಹಿಂದಿನಿಂದಲೂ ಸುಪರಿಚಿತ. ಮಧ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದ ಮಾಯ ಮತ್ತು ಆಜ್óಟೆಕ್ ಜನಾಂಗದವರಿಗೆ ಇದರ ಬಳಕೆ ಗೊತ್ತಿತ್ತು. ಇವರು ಕೋಕೋ ಬೀಜವನ್ನು ವ್ಯಾಪಾರ ವಿನಿಮಯಕ್ಕಾಗಿ ಉಪಯೋಗಿಸುತ್ತಿದ್ದರು. ಆಜ್óಟೆಕ್ ಜನ ಕೋಕೋ ಬೀಜವನ್ನು ಹುರಿದು ಬಿಸಿ ನೀರಿನಲ್ಲಿ ಗೊಟಾಯಿಸಿ ವೆನಿಲ್ಲ ಮುಂತಾದ ಸಾಂಬಾರ ಪದಾರ್ಥಗಳಿಂದ ಸುವಾಸನೆ ಬರುವಂತೆ ಮಾಡಿ ಕುಡಿಯುತ್ತಿದ್ದರು. ಕೊಲಂಬಸ್ ತನ್ನ ನಾಲ್ಕನೆಯ ಪ್ರಪಂಚ ಪರ್ಯಟನದಲ್ಲಿ (1502) ಈ ಗಿಡದ ಕೆಲವು ಬೀಜಗಳನ್ನು ಸ್ಪೇನ್ ದೇಶಕ್ಕೆ ತೆಗೆದುಕೊಂಡು ಹೋದ. ಅಲ್ಲಿ ಇದು ಬಲುಬೇಗ ಜನಪ್ರಿಯವಾಯಿತು; ಕೋಕೋವಿನ ಜೊತೆ ಸಕ್ಕರೆ ಹಾಕಿ ರುಚಿಯನ್ನು ಹೆಚ್ಚಿಸಬಹುದೆಂದು ಈ ಜನ ಕಂಡುಕೊಂಡರು. ಸುಮಾರು ಒಂದು ನೂರು ವರ್ಷ ಈ ಗುಟ್ಟನ್ನು ಸ್ಪೇನ್ ದೇಶದವರು ಯಾರಿಗೂ ಹೇಳಿರಲಿಲ್ಲ. ಆಮೇಲೆ ಇದು ಯೋರೋಪಿನ ಅನೇಕ ಭಾಗಗಳಿಗೆ ಹರಡಿತು. ಅಮೆರಿಕ ಸಂಯುಕ್ತ ಸಂಸ್ಥಾನದ ಮ್ಯಾಸಚೂಸೆಟ್ಸಿನ ಡಾರ್‍ಚೆಸ್ಟರ್‍ನಲ್ಲಿ ನ್ಯೂ ಇಂಗ್ಲೆಂಡಿನ ಪ್ರಯಾಣಿಕರು ವೆಸ್ಟ್ ಇಂಡೀಸ್‍ನಿಂದ ತಂದ ಬೀಜಗಳಿಂದ 1765ರಲ್ಲಿ ಚಾಕೊಲೆಟ್ ತಯಾರು ಮಾಡಿದರು. ಕೋಕೋಪುಡಿ ಮತ್ತು ಚಾಕೊಲೇಟ್‍ಗಳನ್ನು ತಯಾರು ಮಾಡುವ ವಿಧಾನ 18ನೆಯ ಶತಮಾನದಲ್ಲೇ ಗೊತ್ತಿದ್ದರೂ 19ನೆಯ ಶತಮಾನದ ಉತ್ತರಾರ್ಧದ ವರೆಗೂ ಇದು ಕೇವಲ ಸಣ್ಣ ಗಾತ್ರದ ಕೈಗಾರಿಕೆಯಾಗಿತ್ತು. ಅನಂತರ ಪ್ರಪಂಚದ ಬೇರೆಡೆಗಳಲ್ಲೂ ಕೋಕೋ ಬೆಳೆಯ ಪ್ರವೇಶವಾಗಿ ಕೋಕೋ ಬೆಣ್ಣೆ ಸಾಕಷ್ಟು ಪ್ರಮಾಣದಲ್ಲಿ ಸಿಗುವಂತಾಯಿತು. ಇದರಿಂದ ಕೋಕೋ ಮತ್ತು ಚಾಕೊಲೆಟ್ ತಯಾರಿಕೆ ಸುಪ್ರಸಿದ್ಧ ಉದ್ಯಮವಾಯಿತು. ಸ್ವಿಟ್ಜರ್‍ಲೆಂಡಿನಲ್ಲಿ 1878ರಲ್ಲಿ ಹಾಲು ಚಾಕೊಲೆಟನ್ನು ತಯಾರು ಮಾಡಿದರು. ಶೀಘ್ರವಾಗಿ ಇದು ಪ್ರಪಂಚದಲ್ಲೆಲ್ಲ ಪ್ರಸಿದ್ಧಿಯಾಯಿತು.

	ಕಕಾವೊ ಮುಖ್ಯವಾಗಿ ಉಷ್ಣವಲಯಗಳ ಬೆಳೆ. ಇದನ್ನು ಸಮಭಾಜಕವೃತ್ತದ 200 ಉತ್ತರ ಮತ್ತು ದಕ್ಷಿನಗಳಲ್ಲಿ ಮಾತ್ರ ಬೆಳೆಯುತ್ತಾರೆ. ಹೆಚ್ಚು ಕಡಿಮೆ 270 ಸೆಂ. ಸರಾಸರಿ ಉಷ್ಣತೆ ಇದರ ಬೆಳೆಗೆ ಅತ್ಯಾವಶ್ಯಕ. ಹೆಚ್ಚು ಆದ್ರ್ರತೆಯಿದ್ದು ಗರಿಷ್ಟ 380 ಸೆಂ.ಮೀರಿದರೂ ಗಿಡಗಳಿಗೆ ಹಾನಿಯುಂಟಾಗುವುದಿಲ್ಲ. ಆದರೆ ಉಷ್ಣತೆ 180 ಸೆಂ.ಗಿಂತ ಕಡಿಮೆಯಿರಬಾರದು. ಕಕಾವೊ ಬೆಳೆಗೆ ವರ್ಷ ಪೂರ್ತಿ ವ್ಯಾಪಿಸಿದಂತೆ ಕನಿಷ್ಠಪಕ್ಷ 50" ಮಳೆ ಬೀಳಬೇಕು. ನೀರು ಸರಾಗವಾಗಿ ಇಳಿಯಬಲ್ಲ ಹಾಗೂ ಸಸ್ಯಜನ್ಯ ಗೊಬ್ಬರ ಯಥೇಚ್ಛವಾಗಿರುವ ಮಣ್ಣು ಅಗತ್ಯ. ಬಲವಾಗಿ ಬೀಸುವ ಗಾಳಿಯಿಂದ ರಕ್ಷಣೆಯಿರಬೇಕಲ್ಲದೆ ನೆರಳೂ ಅತ್ಯಗತ್ಯ.

	ಬೇಸಾಯದ ಕ್ರಮ: ಕೋಕೋ ಬೆಳೆಯುವ ಜಾಗದಲ್ಲಿ ನೆಳಿಗೆ ಅವಶ್ಯಕವಾದ ಮರಗಳನ್ನು ಬಿಟ್ಟು ಉಳಿದ ಮರಗಿಡಗಳನ್ನು ಇರಗೊಡಬಾರದು. ಒಟ್ಲುಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಅನಂತರ ಸಸಿಗಳು 2' ಎತ್ತರಕ್ಕೆ ಬೆಳೆದಾಗ ಪಾತಿಯಿಂದ ತೆಗೆದು ಶಾಶ್ವತ ಸ್ಥಳಗಳಲ್ಲಿ 10' ಅಂತರಕ್ಕೊಂದರಂತೆ ನಾಟಿ ಹಾಕಬೇಕು. ತೋಟ ವಿರಳವಾಗಿದ್ದಾಗ ಬಾಳೆಗಿಡಗಳನ್ನು ನೆರಳಿಗಾಗಿ ಉಪಯೋಗಿಸುತ್ತಾರೆ. ಈ ಮರಗಳು ಫಲ ಕೊಡುವಂತಾಗುವುದಕ್ಕೆ ಸುಮಾರು 3-4 ವರ್ಷ ಬೇಕು; ಸುಮಾರು ಎಂಟು ವರ್ಷಗಳ ಅನಂತರ ತಮ್ಮ ಗರಿಷ್ಠ ಉತ್ಪಾದನಾ ಸಾಮಥ್ರ್ಯವನ್ನು ಮುಟ್ಟುತ್ತವೆ. ಒಂದು ಮರ ಎಷ್ಟು ಫಸಲು ಕೊಡುತ್ತದೆ ಎಂಬ ವಿಚಾರದಲ್ಲಿ ಅನೇಕ ಅಭಿಪ್ರಾಯಗಳಿವೆ. ಸಾಮಾನ್ಯವಾಗಿ 30-40 ವರ್ಷಗಳ ಕಾಲ ಫಲ ಕೊಡುತ್ತದೆ. ಆದರೆ 100 ವರ್ಷ ಫಸಲು ಕೊಡುತ್ತದೆ ಎಂದು ಹೇಳಿಕೆಯಿದೆ. ರೋಗವನ್ನು ತಡೆಗಟ್ಟುವ ದೃಷ್ಟಿಯಿಂದಲೂ ಉತ್ಪತ್ತಿ ದೃಷ್ಟಿಯಿಂದಲೂ 15-20 ವರ್ಷಗಳಾದ ಮೇಲೆ ಕೋಕೋ ಮರವನ್ನು ತೆಗೆದು ಹಾಕುವುದು ಉತ್ತಮ.

	ಕೋಕೋ ಮರಗಳಿಗೆ ಅನೇಕ ಬಗೆಯ ರೋಗಗಳು ತಗಲುತ್ತವೆ. ಇವುಗಳಲ್ಲಿ ಬಹಳ ಮುಖ್ಯವಾದುದು ಫೈಟಾಫ್ತರ ಎಂಬ ಶಿಲೀಂಧ್ರದಿಂದ ಉಂಟಾಗುವ ರೋಗ. ಕಾಯಿಲೆಗಳಿಗೆ ತಗಲುವ ಈ ರೋಗದಿಂದ ಕಾಯಿಗಳೆಲ್ಲ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗಿ ಬಿಡುತ್ತವೆ. ಈ ರೋಗದಿಂದ 40% ರಷ್ಟು ಬೆಳೆ ಹಾಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಬೋರ್ಡೊ ದ್ರಾವಣದ ಸಿಂಪಡಿಕೆಯಿಂದ ಇದನ್ನು ತಡೆಗಟ್ಟಬಹುದು. ಟ್ರಿನಿಡ್ಯಾಡ್, ಎಕ್ವಡಾರ್ ಮತ್ತು ಪೂರ್ವ ವೆನಿಚ್ವೇಲಗಳಲ್ಲಿನ ಕೋಕೋ ಮರಗಳಿಗೆ ಮರಾಸ್ನಿಯಸ್ ಪೆರಿನೀಸಿಯೋಸಸ್ ಎಂಬ ಶಿಲೀಂಧ್ರದಿಂದ ಉಂಟಾಗುವ ವಿಚಸ್‍ಬ್ರೂಮ್ ಎಂಬ ರೋಗ ಬರುತ್ತದೆ. ಕೋಕೋ ಮರಕ್ಕೆ ಕೆಲವು ವೈರಸ್ ರೋಗಗಳು ಕೂಡ ಬರುವುದುಂಟು.

	ಕಟಾವು ಮತ್ತು ಸಂಸ್ಕರಣ: ಚೆನ್ನಾಗಿ ಬೆಳೆದಿರುವ ಒಂದು ಕೋಕೋ ಮರ ಸುಮಾರು 600 ಸಣ್ಣ ಹೂಗಳನ್ನು ಬಿಡುವುದಾದರೂ ಎಲ್ಲವೂ ಹಣ್ಣಾಗುವುದಿಲ್ಲ. ಕೇವಲ 20-40 ಹೂಗಳು ಮಾತ್ರ ಹಣ್ಣಾಗುತ್ತವೆ. ಇವುಗಳಲ್ಲಿ ಬಹುಪಾಲು ಹಣ್ಣುಗಳು ವರ್ಷದ ಕೆಲವು ನಿರ್ದಿಷ್ಟ ಅವಧಿಗಳಲ್ಲಿ ಪಕ್ಷವಾಗಿ ಕುಯ್ಲಿಗೆ ಸಿದ್ಧವಾಗುತ್ತವೆ. ಕೊಯ್ಲಿನ ಕಾಲ ಸಾಮಾನ್ಯವಾಗಿ ಸೆಪ್ಟೆಂಬರ್-ಮಾರ್ಚ್ ತಿಂಗಳು. ಹಣ್ಣನ್ನು ಮರದಿಂದ ಕೊಯ್ದು ಮಚೆಟ್ ಎಂಬ ವಿಶೇಷ ಕತ್ತಿಯಿಂದ ಹಣ್ಣಿನಲ್ಲಿರುವ ನಾರನ್ನು ತೆಗೆದು ಬೀಜಗಳು ಮತ್ತು ಬೀಜಗಳಿಗೆ ಅಂಟಿಕೊಂಡಿರುವ ತಿರುಳನ್ನು ಬೇರ್ಪಡಿಸಿ ಹುದುಗಿಗೆ ಇಡುತ್ತಾರೆ. ಹುದುಗುವಿಕೆ 3-10 ದಿವಸಗಳಲ್ಲಿ ಪೂರ್ಣಗೊಳ್ಳುತ್ತದೆ. ಅನಂತರ ಬೀಜಗಳನ್ನು ಹೊರತೆಗೆದು ಹುರಿದಾಗ ಚಾಕೊಲೆಟ್ ವಾಸನೆ ಕೊಡುವ ಪೂರ್ವಗಾಮಿ ವಸ್ತುಗಳು ಉತ್ಪತ್ತಿಯಾಗುತ್ತವೆ. ಬೀಜಗಳು ತೇವಾಂಶದಿಂದ ಕೂಡಿ ದಪ್ಪ ಆಗುತ್ತವೆ. ಬೀಜದ ಒಳಭಾಗ ಕಂದು ಬಣ್ಣಕ್ಕೆ ತಿರುಗುವುದಲ್ಲದೆ ಬೀಜಕ್ಕೆ ಒಂದು ಬಗೆಯ ಕಟುವಾಸನೆಯೂ ಬರುತ್ತದೆ. ಬೀಜದೊಳಗಿನ ತಿರುಳÀನ್ನು ಈಗ ಸುಲಭವಾಗಿ ತೆಗೆಯಬಹುದು. ಆಮೇಲೆ ಬೀಜಗಳನ್ನು ಬಿಸಿಲಿನಲ್ಲಿ ಇಲ್ಲವೆ ಕೃತಕ ಶಾಖ ಕೊಟ್ಟು ಬೀಜದಲ್ಲಿ 6 ರಿಂದ 8 ಭಾಗದಷ್ಟು ಮಾತ್ರ ನೀರಿನ ಅಂಶ ಉಳಿಯುವಂತೆ ಒಣಗಿಸಲಾಗುತ್ತದೆ. ಅನಂತರ ಸಾಗಣೆಗೆ ಇಲ್ಲವೆ ಶೇಖರಣೆಗೆ ಅನುಕೂಲವಾಗುವಂತೆ ಚೀಲಗಳಲ್ಲಿ ತುಂಬಿಡಲಾಗುತ್ತದೆ. ವರ್ಷಕ್ಕೆ ಒಂದು ಮರದಿಂದ 1-2 ಪೌಂಡು ಮತ್ತು ಒಂದು ಎಕರೆಯಿಂದ ಸು.350 ಪೌಂಡು ಸಂಸ್ಕರಿಸಿದ ಬೀಜಗಳನ್ನು ಪಡೆಯಬಹುದು.

	ಕೋಕೋವನ್ನು ಅದರ ಸ್ವಾದದ ಆಧಾರದ ಮೇಲೆ ಸಾಮಾನ್ಯ ಮತ್ತು ಉತ್ತಮ ಎಂಬ ಎರಡು ದರ್ಜೆಗಳಾಗಿ ವಿಂಗಡಿಸಲಾಗುತ್ತದೆ. ವರ್ಗೀಕರಣ ಕೋಕೋಪಿನ ಮುಖ್ಯ ಬಗೆಗಳಿಗೆ ಸಂಬಂಧಪಟ್ಟುದಾಗಿದೆ. ಕೋಕೋವಿನ ಬಗೆಗಳಾದ ಕ್ರಿಯಲೊ ಮತ್ತು ಟ್ರೈನಿಟೇರಿಯೊ ಎಂಬುವು ಉತ್ತಮ ದರ್ಜೆಯ ಕೋಕೋವನ್ನು ಕೊಡುತ್ತವೆ. ಕೋಕೋ ಉತ್ಪನ್ನದ ಸುಮಾರು 10% ಭಾಗ ಈ ದರ್ಜೆಗೆ ಸೇರಿದುದು. ಉಳಿದ 90% ಭಾಗ ಫೊರ್ಯಾಸ್ಟಿರೊ ಎಂಬ ಬಗೆಯಿಂದ ಬರುವ ಸಾಮಾನ್ಯ ಕೋಕೋ. ಉತ್ತಮ ದರ್ಜೆಯ ಕೋಕೋವನ್ನು ಅರ್ರಿಬ, ಮಾರಕೈಬೊ, ಕ್ಯಾರಕಾಸ್ ಮತ್ತು ಟ್ರೆನಿಡಾಡ್ ಎಸ್ಟೇಟ್ ಎಂಬ ವಾಣಿಜ್ಯನಾಮಗಳಿಂದ ಮಾರಲಾಗುತ್ತದೆ. ಈ ವಿವಿಧ ಪ್ರಭೇದಗಳನುಷ್ನ ವೆನಜ್ವೇóಲ, ಎಕ್ವಡಾರ್, ಶ್ರೀ ಲಂಕಾ ಮತ್ತು ಜಾವಗಳಲ್ಲಿ ಬೆಳೆಯುತ್ತಾರೆ. ಸಾಮಾನ್ಯ ದರ್ಜೆಯ ಕೆಜಾಕೋವಿಗೆ ಅತ್ರ ಎಂಬ ವಾಣಿಜ್ಯ ನಾಮ ಇದೆ. ಈ ಬಗೆಯನ್ನು ಘಾನ, ಬ್ರಜಿಲ್, ನೈಜೀರಿಯ, ಮತ್ತು ಡೊಮಿನಿಕ ರಿಪಬ್ಲಿಕ್‍ಗಳಲ್ಲಿ ಬೆಳೆಯುತ್ತಾರೆ. ಕೋಕೋ ಬಹಳ ಪುಷ್ಟಿದಾಯಕ ಆಹಾರವೆಂದು ಹೆಸರಾಗಿದೆ. ಜೊತೆ ಉತ್ತೇಜಕವೂ ಹೌದು. ಇದರಲ್ಲಿ 40.3% ಕಾರ್ಬೊದೈಡ್ರೇಟ್, 22%ಕೊಬ್ಬು 18.1% ಪ್ರೋಟೀನು, 6.3% ಲವಣಾಂಶ, ಕೊಂಚ ಭಾಗ ನೀರು ಮತ್ತು ನಾರಿನ ಆಂಶ ಇವೆ. ಉತ್ತೇಜನ ಗುಣಕ್ಕೆ ತಿಯೋಬ್ರೋಮಿನ್ (2.2%) ಮತ್ತು ಕೆಫೀನ್ (0.1%)ಗಳೇ ಕಾರಣ.

	ಕೋಕೋವಿನ ಉಪಯೋಗ ಎಲ್ಲರಿಗೂ ತಿಳಿದದ್ದೇ. ಇದನ್ನು ನೇರವಾಗಿ ಇಲ್ಲವೆ ಚಾಕೊಲೆಟ್ ರೂಪದಲ್ಲಿ ಸಿಹಿತಿಂಡಿ ಐಸ್ ಕ್ರೀಮ್, ಮಾದಕವಲ್ಲದ ಪಾನೀಯ-ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕ್ಯಾಂಡಿಗಳಿಗೆ ಉಪಯೋಗಿಸಲಾಗುವ ಎಲ್ಲ ಬಗೆಯ ಸ್ವಾದ ವಸ್ತುಗಳಿಗಿಂತ ಚಾಕೊಲೆಟ್ ಸ್ವಾದವೇ ಅತಿಹೆಚ್ಚು ಜನಪ್ರಿಯವಾದುದು.

	ಕೋಕೋವಿನಿಂದ ಚಾಕೊಲೆಟ್ ಅಲ್ಲದೆ ಕೋಕೋಬೆಣ್ಣೆ, ಕೋಕೋಪುಡಿ ಮುಂತಾದವನ್ನೂ ತಯಾರಿಸಲಾಗುತ್ತದೆ. ಈ ಉತ್ಪನ್ನಗಳನ್ನು ಪಡೆಯುವ ಮುನ್ನ ಕೋಕೋ ಬೀಜಗಳನ್ನು ವಿಶೇಷ ರೀತಿಯಲ್ಲಿ ಹದಗೊಳಿಸಲಾಗುತ್ತದೆ. ಹದಮಾಡುವ ರೀತಿ ಹೀಗಿದೆ: ಬೀಜಗಳನ್ನು ಶುದ್ಧೀಕರಿಸಿ, ತೊಳೆದು 1130-1170 ಸೆಂ. ಉಷ್ಣತೆಯಲ್ಲಿ ಹುರಿದು ಬೇಕಾದ ಬಣ್ಣ ಮತ್ತು ವಾಸನೆ ಬರುವಂತೆ ಮಾಡುತ್ತಾರೆ. ಅನಂತರ ಅವುಗಳಿಂದ ಸಿಪ್ಪೆ ತೆಗೆದು. ಚೂರು ಮಾಡಲಾಗುತ್ತದೆ. ಚೂರುಗಳಿಗೆ ನಿಬ್ಸ್ ಎಂಬ ಹೆಸರಿದೆ. ಸಿಪ್ಪೆಗಳಿಂದ ಒಂದು ಬಗೆಯ ಟೀ ಮಾಡಬಹುದು; ಆದರೆ ಇವನ್ನು ಗೊಬ್ಬರವಾಗಿ ಬಳಸುವುದೇ ವಾಡಿಕೆ. ಅನಂತರ ನಿಬ್‍ಗಳನ್ನು ಅವುಗಳ ರುಚಿ, ವಾಸನೆ, ಮತ್ತು ದರ್ಜೆಗಳಿಗೆ ಅನುಸಾರವಾಗಿ ಬೇರ್ಪಡಿಸಿ ಕೋಕೋ ಮುದ್ದೆ ಇಲ್ಲವೆ ಚಾಕೊಲೆಡ್ ದ್ರವವನ್ನಾಗಿ ಅರೆಯಲಾಗುತ್ತದೆ. ಚಾಕೊಲೆಟ್ ದ್ರವವನ್ನು ತಂಪುಗೊಳಿಸಿ ಕಂದುಬಣ್ಣದ ಚಾಕೊಲೆಟ್ ಬ್ಲಾಕನ್ನು ತಯಾರಿಸಬಹುದು. ಆ ಮೇಲೆ ಹೈಡ್ರಾಲಿಕ್ ಒತ್ತಡದಿಂದ ಇವುಗಳಲ್ಲಿರುವ ಕೊಬ್ಬಿನ ಸ್ವಲ್ಪ ಅಂಶವನ್ನು ಹೊರತೆಗೆಯಲಾಗುತ್ತದೆ. ಅನಂತರ ಉಳಿಯುವ ಮುದ್ದೆಯೇ ಚಾಕೊಲೆಟ್. ಇದಕ್ಕೆ ಸಕ್ಕರೆಯನ್ನು ಸೇರಿಸಿ ಸಿಹಿ ಚಾಕೊಲೆಟ್ ತಯಾರಿಸಬಹುದು. ಸಿಹಿ ಚಾಕೊಲೆಟ್ ತಯಾರಿಸುವಾಗ ಕೊಂಚ ಕೋಕೋ ಬೆಣ್ಣೆಯನ್ನು ಮತ್ತೆ ಸೇರಿಸುವುದುಂಟು. ಇದನ್ನು ನೇರವಾಗಿಯೇ ಸೇವಿಸಬಹುದು ಇಲ್ಲವೆ ಕ್ಯಾಂಡಿಗಳ ತಯಾರಿಕೆಯಲ್ಲಿ ಬಳಸಬಹುದು. ಸಿಹಿ ಚಾಕೊಲೆಟ್‍ಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಾಲನ್ನು ಸೇರಿಸಿ ಹಾಲುಚಾಕೊಲೆಟ್ ತಯಾರಿಸಲಾಗುತ್ತದೆ. ಸಾಧಾರಣವಾಗಿ ಒಳ್ಳೆಯ ದರ್ಜೆಯ ಹಾಲು ಚಾಕೊಲೆಟ್‍ನಲ್ಲಿ ಸುಮಾರು 20%-22% ಹಾಲಿನ ಅಂಶ ಇರುತ್ತದೆ.

	ಕೋಕೋವನ್ನು ಹದಗೊಳಿಸಿ ಪಡೆಯುವ ಕೋಕೋ ಮುದ್ದೆಯನ್ನು ಕ್ಷಾರೀಯ ಲವಣದೊಂದಿಗೆ ಸಂಸ್ಕರಿಸದರೆ ಕೋಕೋಪುಡಿ ದೊರೆಯುತ್ತದೆ. ಹೈಡ್ರಾಲಿಕ್ ಒತ್ತಡ ಪ್ರಯೋಗದಿಂದ ಕೋಕೋಬೆಣ್ಣೆಯನ್ನು ತೆಗೆಯಬಹುದೆಂದು ಮೇಲೆ ಹೇಳಿದೆ. ಈ ಬೆಣ್ಣೆಯನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿಯೂ ಅಲಂಕರಣ ವಸ್ತುಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ. ಕೆಲವು ಬಗೆಯ ಧರ್ಮ ತುರಿಗಳಿಗೂ ಇದು ಶುದ್ಧರೂಪದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ. 					(ಜೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ